ವೀರಗಾಸೆ ಕುಣಿತ -
	ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವಸಂಪ್ರದಾಯದ ಧಾರ್ಮಿಕ ವೀರನೃತ್ಯ. ಇಬ್ಬರಿಂದ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುತ್ತಾರೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಈ ನೃತ್ಯ ಪ್ರಚಲಿತವಿದೆ. ತಾಳ, ಶ್ರುತಿ, ಚಮಾಳ (ಸಮ್ಮೇಳ ಸಂಬಾಳ), ಓಲಗ ಅಥವಾ ಮೋರಿ, ಕರಡೆವಾದ್ಯ-ಈ ಪಂಚವಾದ್ಯಗಳು ಇಲ್ಲಿ ಬಳಕೆಯಾಗುತ್ತವೆ. ಕರಡೆ ಈ ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.

	ಈ ಕಲೆಗೆ ಹಿನ್ನೆಲೆಯಾದ ಒಂದು ಪೌರಾಣಿಕ ಕಥೆಯಿದೆ: ತಂದೆಯ ಮಾತನ್ನು ಮೀರಿ ಪಾರ್ವತಿ ಶಿವನನ್ನು ವರಿಸುತ್ತಾಳೆ. ಇದೇ ಕಾರಣವಾಗಿ ಪಾರ್ವತಿಯ ತಂದೆ ದಕ್ಷಬ್ರಹ್ಮ ಶಿವನನ್ನು ದ್ವೇಷಿಸತೊಡಗುತ್ತಾನೆ. ಹೀಗಿರುವಾಗ ದಕ್ಷಬ್ರಹ್ಮ ಆಚರಿಸಿದ ಒಂದು ಯಾಗಕ್ಕೆ ಶಿವನೊಬ್ಬನನ್ನು ಬಿಟ್ಟು ಉಳಿದೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆಂದು ಭಾವಿಸಿದ ಪಾರ್ವತಿ ವ್ಯಗ್ರಳಾಗಿ ನ್ಯಾಯ ಕೇಳುವ ಸಲುವಾಗಿ ಗಂಡನ ತಡೆಯನ್ನು ಉಲ್ಲಂಘಿಸಿ ತಂದೆಯ ಬಳಿಗೆ ಬರುತ್ತಾಳೆ. ಅಳಿಯನ ಮೇಲಿನ ಕೋಪದಿಂದ ಮಗಳೆಂಬ ಮಮತೆಯನ್ನೂ ತೊರೆದು ದಕ್ಷಬ್ರಹ್ಮ ಪಾರ್ವತಿಯನ್ನು ತಿರಸ್ಕಾರದಿಂದ ನಡೆಸಿಕೊಂಡದ್ದಲ್ಲದೆ ಅವಳೆದುರಿಗೆ ಶಿವನನ್ನು ನಿಂದಿಸುತ್ತಾನೆ; ಪತಿನಿಂದೆಯನ್ನು ಸಹಿಸಲಾಗದ ಪಾರ್ವತಿ ಅಗ್ನಿಕುಂಡದಲ್ಲಿ ಬಿದ್ದು ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾಳೆ. ಈ ದುರ್ಘಟನೆಯಿಂದ ಕುಪಿತನಾದ ಶಿವ ಉಗ್ರನಾಗಿ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ. ಕೋಪದಿಂದ ಹಣೆಯ ಬೆವರನ್ನು ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದ ವೀರಭದ್ರನ ಅವತಾರವಾಗುತ್ತದೆ. ಮುಂದೆ ವೀರಭದ್ರ ದಕ್ಷಬ್ರಹ್ಮನ ಯಾಗಶಾಲೆಗೆ ಬಂದು ಅದನ್ನು ಹಾಳುಗೈಯುತ್ತಾನೆ. ಅಲ್ಲಿ ವೀರಭದ್ರ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಣಿತ ಎಂದೂ ಅಂದಿನಿಂದ ಈ ಕಲೆ ಬೆಳೆದುಬಂದಿತೆಂದೂ ಕಲಾವಿದರ ಹೇಳಿಕೆ. 

	ವೀರಗಾಸೆ ಕುಣಿತದವರ ವೇಷ ಭೂಷಣಗಳು ಹೀಗಿರುತ್ತವೆ : ಬಿಳಿಯ ಪಂಚೆಯ ವೀರಗಚ್ಚೆ, ತಲೆಗೆ ಅರಿಶಿನ ಅಥವಾ ನೀಲಿ ಬಣ್ಣದ ರುಮಾಲು, ಕಾವಿ ಬಣ್ಣದ ಕಸೆಯಂಗಿ, ಕೊರಳಲ್ಲಿ ರುದ್ರಾಕ್ಷಿ ಸರ, ಹಣೆಗೆ ವಿಭೂತಿ, ಕಿವಿಯಲ್ಲಿ ಕುಂಡಲ, ಸೊಂಟಕ್ಕೆ ಸೊಂಟಪಟ್ಟಿ ಕೈಯಲ್ಲಿ ಬಿಚ್ಚುಗತ್ತಿ, ಕಾಲಲ್ಲಿ ಗೆಜ್ಜೆ.

	“ಉಲ್ಲಾಸಭರಿತರಾಗಿ ಕುಳಿತಿರುವ ಎಲ್ಲಾ ಜನಗಳು ಸುಲಲಿತವಾಗಿ ಗುಲ್ಲುಮಾಡದೆ ನೀವು ಕೇಳಿರಿ, ಅಹಹ ರುದ್ರಾ ಅಹಹಾ ದೇವಾ.......” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ಈ ಕುಣಿತದಲ್ಲಿ ವೀರಭದ್ರನ ವರ್ಣನೆಯೇ ಪ್ರಧಾನವಾಗಿರುತ್ತದೆ. ವೀರಭದ್ರ ಹುಟ್ಟಿದ ಸಂದರ್ಭದ ಒಂದು ವರ್ಣನೆ ಹೀಗಿದೆ : “ವೀರಭದ್ರದೇವರು ಹುಟ್ಟಿದ ರೂಪೆಂತೆಂದೊಡೆ, ಹುಟ್ಟಿದಾಗಲೆ ಹೂವಿನಗಾಸೆ, ಮಂಜುಳಗಾಸೆ, ಬ್ರಹ್ಮಗಾಸೆ, ವಿಷ್ಣುಗಾಸೆ, ರುದ್ರಗಾಸೆ, ಮೆಟ್ಟಿದ ಹೊನ್ನಾವಿಗೆ, ಸಾವಿರ ಶಿರ, ಮೂರು ಸಾವಿರ ನಯನ, ಎರಡು ಸಾವಿರ ಭುಜ, ಕೆಕ್ಕರಿಸಿದ ಕಣ್ಣು, ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರ ದೇವರು ಹೋಮದ ಕುಂಡದ ಬಳಿಗೆ ಹೇಗೆ ಬರುತ್ತಾರೆಂದರೆ .............”.

	ಚಮಾಳದ ಹಾಗೂ ಕರಡೆಯ ಬಡಿತಗಳು ಇವರ ಕುಣಿತಕ್ಕೆ ಸ್ಫೂರ್ತಿನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಯಾರಾದರೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮತ್ತೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗು ತ್ತದೆ. ಗತಿಯಿಂದ ಗತಿಗೆ ಕುಣಿತ, ಬಡಿತಗಳ ವೇಗ ಹೆಚ್ಚುತ್ತ ಹೋಗುತ್ತದೆ. 

	ಹಬ್ಬಹರಿದಿನಗಳಲ್ಲಿ, ತೇರುಜಾತ್ರೆಗಳಲ್ಲಿ, ಮದುವೆ, ಮನೆದೇವರ ಉತ್ಸವಗಳಲ್ಲಿ ವೀರಗಾಸೆ ಕುಣಿತವನ್ನು ಏರ್ಪಡಿಸುವ ಪದ್ಧತಿ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಚಲಿತವಿದೆ.
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
 				
				(ಕೆ.ಆರ್.)